ಚೀನೀ ನಾಟಕ

	ಚೀನೀ ರಂಗಭೂಮಿ ಕ್ರಿ.ಶ.ಕ್ಕೆ ಸಾವಿರಾರು ವರ್ಷಗಳಷ್ಟು ಪ್ರಾಚೀನವಾದುದು. ಆಧುನಿಕ ಪ್ರಗತಿಪರ ರಂಗಭೂಮಿಯ ಅನೇಕ ವೈಶಿಷ್ಟ್ಯಗಳು ಅಂದಿನ ಕಾಲದಲ್ಲಿಯೆ ಇದ್ದುವು ಎಂಬ ಉತ್ಸಾಹೀ ತಜ್ಞರ ಜೊತೆ ಇಂದಿಗೂ ಚೀನೀ ನಾಟಕ ಎಂದಿನಂತೆಯೇ ಇದೆ ಎಂಬ ತಜ್ಞರೂ ಇದ್ದಾರೆ.

	ಚೀನೀ ನಾಟಕದ ಉಗಮದ ಬಗ್ಗೆ ನಿಶ್ಚಿತವಾದ ಅಭಿಪ್ರಾಯವಿಲ್ಲ. ಆದರೆ ಪ್ರಾಚೀನ ಕಾಲದಲ್ಲಿಯ ಧಾರ್ಮಿಕ ವಿಧಿನಿಯಮಗಳ ಆಚರಣೆಯಲ್ಲಿ ಅದರ ಉಗಮವನ್ನು ಕಾಣಬಹುದು ಎಂಬುದನ್ನು ಸರ್ವಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. ವಿಶೇಷವಾಗಿ ಸಾರ್ವಜನಿಕ ಧಾರ್ಮಿಕ, ಉತ್ಸವಗಳಲ್ಲಿ, ಧರ್ಮಕ್ಕೆ ಸಂಬಂಧಿಸಿದ ಜಾತ್ರೆಗಳಲ್ಲಿ ಮುಂಚಿನಿಂದಲೂ ಗಾಯನ ಮತ್ತು ನೃತ್ಯ ನಡೆಯುತ್ತಿದ್ದುವು. ಇಂದಿನ ದೃಷ್ಟಿಯಿಂದ ಅವನ್ನು ನಾಟಕ ಎಂದು ಹೇಳಲಾಗದು. ಕ್ರಮೇಣ ಗಾಯನವಾಗಲಿ ನೃತ್ಯವಾಗಲಿ ಒಂದು ಕತೆಯನ್ನು ಹೇಳುವಲ್ಲಿ ಬಳಕೆಗೆ ಬಂತು. ಭಾರತದ ಪುರಾಣ ಪ್ರವಚನ ಇಲ್ಲವೆ ತರುವಾಯದ ಹರಿಕಥೆಗೆ ಇದನ್ನು ಹೋಲಿಸಬಹುದು. ನಾಟಕದ ಬೀಜವನ್ನು ಈ ಪ್ರಕಾರದಲ್ಲಿ ಕಾಣಬಹುದು; ಹಾಡಿನಲ್ಲಿ ಇಲ್ಲವೆ ಕುಣಿತದಲ್ಲಿ ಒಂದು ಕತೆಯನ್ನು ನಿವೇದಿಸುವುದು. ಇಲ್ಲಿ ಹಾಡಿಗೆ ಮತ್ತು ಕುಣಿತಕ್ಕೇ ಪ್ರಾಧಾನ್ಯವಿದ್ದರೂ ಅದರ ಜೊತೆ ಅಂಗದ ಚಲನವಲನಗಳು, ಧ್ವನಿಯ ಏರಿಳಿತಗಳು ಇದ್ದುದರಿಂದ ಇದೊಂದು ವಿಶಿಷ್ಟ ಸ್ವರೂಪದ್ದಾಯಿತು. ಕ್ರಿ.ಶ. 6ನೆಯ ಶತಮಾನದ ಸುಮಾರಿಗೆ ಈ ಸ್ವರೂಪಕ್ಕೆ ಒಂದು ಸ್ಥಿರತೆ ಬಂತು.

	ಚೀನೀ ನಾಟಕದ ಇನ್ನೊಂದು ವಿಶೇಷವೆಂದರೆ ಇದು ರಾಜರ ಮತ್ತು ಧನಿಕರ ಕಲೆಯಾಗಿತ್ತು. ಸಾಮಾನ್ಯ ಜನರ ರಂಗಭೂಮಿ ಎಂಬುದು ಕೇವಲ ಗೊಂಬೆಯಾಟಕ್ಕೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಚೀನೀ ನಾಟಕ ಬೆಳೆದದ್ದು ರಾಜರ ಆಶ್ರಯದಲ್ಲಿ ಇಲ್ಲವೆ ನಗರಗಳಲ್ಲಿ ಅದರಲ್ಲೂ ರಾಜಧಾನಿಗಳಲ್ಲಿ, ಇಂದು ಚೀನೀ ಭಾಷೆಯಲ್ಲಿ ನಾಟಕಕ್ಕೆ ಚಿಂಗ್ ಷೀ ಎಂಬ ಹೆಸರಿದ್ದು ಅದರ ಅರ್ಥ ರಾಜಧಾನಿಯಾದ ಪೀಕಿಂಗಿನ ನಾಟಕ ಎಂದು. ಕ್ರಿ.ಶ. 8ನೆಯ ಶತಮಾನದಲ್ಲಿ ಆಳಿದ ಸಮ್ರಾಟ್ ಮಿಂಗ್ ಹುವಾಂಗ್ ಎಂಬವನ ಆಳ್ವಿಕೆಯಲ್ಲಿ ಚೀನೀ ರಂಗಭೂಮಿಯ ಉತ್ಕರ್ಷ ಪ್ರಾರಂಭವಾಯಿತೆಂದು ಊಹಿಸಲಾಗಿದೆ. ಇದೇ ಕಾಲದಲ್ಲಿ ನಾಟಕವನ್ನು ಸಾಮಾನ್ಯರಿಗೂ ಪ್ರಿಯವಾಗುವಂತೆ ಮಾಡುವ ಮೊದಲ ಪ್ರಯತ್ನ ನಡೆಯಿತು. ಮುಂದೆ ಸೂಂಗ್ ಮನೆತನದ ಆಳ್ವಿಕೆಯಲ್ಲಿ (960-1279) ರಂಗಭೂಮಿ ಬೆಳೆಯಿತು. ಕೊನೆಗೆ 1250-1368ರ ಯುಆನ್ ಆಳ್ವಿಕೆಯಲ್ಲಿ ರಂಗಭೂಮಿಯ ಬಗ್ಗೆ ನಿಯಮಗಳೂ ಶಾಸ್ತ್ರಗಳೂ ರಚಿತವಾಗಿ ಅದಕ್ಕೊಂದು ಸ್ಥಿರರೂಪ ಬಂತು. ಯುಆನ್ ನಾಟಕ ಎಂಬ ಹೆಸರೂ ಈ ರೂಪಕ್ಕೆ ಬಂತು. ಈ ಪ್ರಕಾರದ ನಾಟಕ ಮಿಂಗ್ ವಂಶದ ಆಳ್ವಿಕೆಯಲ್ಲಿ (ಕ್ರಿ.ಶ., 1368-1644) ಬೆಳೆದು, ಮಿಕ್ಕ ಎಲ್ಲ ಪ್ರಕಾರಗಳನ್ನೂ ಹಿಂದೂಡಿ 19ನೆಯ ಶತಮಾನದವರೆಗೆ ಜನಪ್ರಿಯವಾಯಿತು.

	ಅಭಿಜಾತ ಮತ್ತು ಜಾನಪದ ಎಂಬ ಭೇದ ಚೀನೀ ರಂಗಭೂಮಿಯಲ್ಲೂ ಕಾಣ ಬರುತ್ತದೆ. ಪ್ರಾರಂಭದಿಂದಲೂ ಅಭಿಜಾತವಾದ ಈ ರಂಗಭೂಮಿಯನ್ನು ಜನಪ್ರಿಯ ಮಾಡುವ ಪ್ರಯತ್ನ 8ನೆಯ ಶತಮಾನದಲ್ಲಿ ನಡೆಯಿತೆಂದು ಮೇಲೆ ಹೇಳಿದೆಯಷ್ಟೆ. ಈ ಸಂದರ್ಭದಲ್ಲಿ 3-4 ನೆಯ ಶತಮಾನಗಳವರೆಗೆ ಚೀನೀ ರಂಗಭೂಮಿಯಲ್ಲಿ ಎರಡು ಬೇರೆ ಬೇರೆ ಪ್ರಕಾರಗಳು ಬೆಳೆದುವು; ಒಂದು ಉತ್ತರ (ಚೀನ) ದ ಮಾರ್ಗ, ಇನ್ನೊಂದು ದಕ್ಷಿಣ (ಚೀನ)ದ ಮಾರ್ಗ; ಉತ್ತರ ಮಾರ್ಗದಲ್ಲಿ (ಕುನ್‍ತ್ಸೂ) ನಾಟಕದ ಭಾಷೆ ಬಳಕೆಯ ಭಾಷೆ, ಕತೆ ಐತಿಹಾಸಿಕ ಇಲ್ಲವೆ ಪ್ರಣಯಕ್ಕೆ ಸಂಬಂಧಿಸಿದ್ದು, ಮತ್ತು ಕತೆಯ ಬೆಳವಣಿಗೆಯಲ್ಲಿ ನಟರ ಕೈವಾಡ ಹೆಚ್ಚು. ದಕ್ಷಿಣ ಮಾರ್ಗದಲ್ಲಿ ಗೀತಗಳು ಛಂದೋಬದ್ದ, ಬೆಳೆವಣಿಗೆ ನಿಯಮಬದ್ಧ. ಸಂಭಾಷಣೆ ಗ್ರಾಂಥಿಕ ಶೈಲಿಯದು. ಕೊನೆಗೆ 14ನೆಯ ಶತಮಾನದಿಂದ ದಕ್ಷಿಣ ಮಾರ್ಗವೆ ಪ್ರಬಲವಾಗಿ ಜನಪ್ರಿಯವಾಯಿತು. ಒಂದು ಕಾಲದಲ್ಲಿ ಮಂಗೋಲರ ಪ್ರಭಾವದಿಂದ ಗೀತನಾಟಕ ಬೆಳೆಯಿತು. ಆದರೆ ಪ್ರಾರಂಭದಿಂದಲೂ ಸಂಗೀತ ಚೀನೀ ನಾಟಕದ ಒಂದು ಮಹತ್ತ್ವದ ಅಂಗವಾಗಿದ್ದು. ಯಾವ ಪ್ರಕಾರದಲ್ಲೂ ಅದು ಕಂಡು ಬರುತ್ತಿತ್ತಾದ್ದರಿಂದ ಗೀತನಾಟಕಗಳ ವೈಶಿಷ್ಟ್ಯ ಬಹುಕಾಲ ಬಾಳಲಿಲ್ಲ.

	ಚೀನೀ ನಾಟಕ ಎರಡು ತರದ್ದು. ಒಂದು ವೀರರ ಕತೆಗೆ ಸಂಬಂಧಿಸಿದ್ದು, ಇನ್ನೊಂದು ಚೀನೀಯರೆ ಹೇಳುವಂತೆ ಸಾಂಸಾರಿಕ ನಾಟಕ. ಅನೇಕ ಪೂರ್ವದೇಶಗಳಲ್ಲಿಯಂತೆ ಚೀನೀ ನಾಟಕದಲ್ಲೂ ಸುಖಾಂತ (ಕಾಮೆಡಿ), ದುಃಖಾಂತ (ಟ್ರ್ಯಾಜಡಿ) ಎಂಬ ಭೇದವಿದ್ದಿರಲಿಲ್ಲ. ನಾಟಕದಲ್ಲಿ ಎರಡು ವರ್ಗಗಳಿದ್ದಂತೆ ನಟರಲ್ಲಿ ನಾಲ್ಕು ವರ್ಗಗಳಿದ್ದುವು-ಗಂಡು, ಹೆಣ್ಣು, ಬಣ್ಣದ ಮುಖ ಮತ್ತು ಹಾಸ್ಯಗಾರ ಎಂದು. ಚೀನೀ ನಾಟಕಗಳಲ್ಲಿ ಗಂಡಸೇ ಸ್ತ್ರೀಪಾತ್ರವನ್ನು ಮಾಡುತ್ತಿದ್ದುದರಿಂದ ಎರಡನೆಯ ವರ್ಗಕ್ಕೆ ಒಂದು ಮಹತ್ತ್ವವಿದೆ. ಈ ನಾಲ್ಕು ವರ್ಗಗಳ ನಟರ ಚಲನ-ವಲನ; ಹಾವ-ಭಾವ, ಮಾತಿನ ಶೈಲಿ ಇವು ಬೇರೆಬೇರೆಯಾಗಿರುತ್ತಿದ್ದುವು; ಇವುಗಳಲ್ಲಿ ಹಾಸ್ಯಗಾರನೊಬ್ಬನೆ ಬಳಕೆಯ ಭಾಷೆಯಲ್ಲಿ ಮಾತನಾಡುತ್ತಿದ್ದ. ಮಿಕ್ಕವರ ಶೈಲಿ ಗ್ರಾಂಥಿಕ. ಈ ವರ್ಗಗಳಿಗೆ ಇನ್ನೂ ಒಂದು ಕಾರಣಕ್ಕಾಗಿ ಮಹತ್ತ್ವವಿದೆ. ಅದೆಂದರೆ ಪ್ರಾಚೀನ ಕಾಲದಿಂದಲೂ ನಟರಿಗೆ ಶಿಕ್ಷಣ ಕೊಡಲ್ಪಡುತ್ತಿತ್ತು. ಅಭ್ಯರ್ಥಿಯನ್ನು ಚೆನ್ನಾಗಿ ಪರೀಕ್ಷಿಸಿ ಅವನ ಇಚ್ಛೆಯನ್ನೂ ಯೋಗ್ಯತೆಯನ್ನೂ ಒಲವನ್ನೂ ಒರೆ ಹಚ್ಚಿ ಆಮೇಲೆ ಅವನಿಗೆ ಪ್ರವೇಶವನ್ನು ಕೊಡಲಾಗುತ್ತಿತ್ತು. ಆತ ಶಿಕ್ಷಣ ಮುಗಿಯುವವರೆಗೆ ಕಠಿಣ ಬ್ರಹ್ಮಚರ್ಯ ವ್ರತವನ್ನು ಪಾಲಿಸುವವನಂತೆ ವಸತಿಗೃಹದಲ್ಲಿಯೇ ಇರಬೇಕಾಗುತ್ತಿತ್ತು. ಪ್ರತಿಯೊಬ್ಬನಿಗೂ ವ್ಯಾಯಾಮ ಕಡ್ಡಾಯವಾಗಿತ್ತು. ಆಮೇಲೆ ನಾಲ್ಕು ವರ್ಗಗಳ ನಟರಲ್ಲಿ ಯಾವ ವರ್ಗಕ್ಕೆ ಅವನು ಯೋಗ್ಯ ಎಂಬುದನ್ನು ನಿರ್ಧರಿಸಿ ಆಯಾ ವಿದ್ಯಾರ್ಥಿಯನ್ನು ಆಯಾ ವರ್ಗಕ್ಕಾಗಿ ತರಬೇತುಗೊಳಿಸಲಾಗುತ್ತಿತ್ತು. ಹೀಗೆ ಶಿಕ್ಷಣ ಪಡೆದರೂ ನಟರಿಗೆ ಸಮಾಜದಲ್ಲಿ ಸ್ಥಾನವಿದ್ದಿರಲಿಲ್ಲ. ಅವರು ಸಮಾಜಬಾಹಿರರೆಂದೇ ಪರಿಗಣೀಸಲ್ಪಡುತ್ತಿದ್ದರು. ಸರ್ಕಾರೀ ನೌಕರಿಗಳಿಗಾಗಿ ನಡೆಯುವ ಸ್ಪರ್ಧಾ ಪರೀಕ್ಷೆಗಳಿಗೆ ಕೊಡಲು ಅವರಿಗೆ ಅಧಿಕಾರವಿದ್ದಿರಲಿಲ್ಲ.

	ಇಷ್ಟೊಂದು ನಿಯಮಬದ್ಧವಾದ ಚೀನೀ ನಾಟಕವನ್ನು ತೀರ ಸಾದಾ ಎನ್ನಿಸುವಂಥ ರಂಗಭೂಮಿಯಲ್ಲಿ ಪ್ರದರ್ಶಿಸಲಾಗುತ್ತಿತ್ತು. ರಂಗಸಜ್ಜಿಕೆಯ ಯಾವ ವಿಶಿಷ್ಟ ಸಲಕರಣೆಗಳೂ ಇರುತ್ತಿರಲಿಲ್ಲ. ಹಿಂದೆ ಒಂದು ಸಾದಾ ಪರದೆ, ರಂಗಸ್ಥಲದ ಮೇಲೆ ಒಂದು ಚಿಕ್ಕ ಮೇಜು ಮತ್ತು ಎರಡು ಸಾದಾ ಕುರ್ಚಿಗಳು, ನೆಲಕ್ಕೆ ಒಂದು ಹಾಸುಗೆ —ಇಷ್ಟೆ. ನಟರ ಪ್ರವೇಶಕ್ಕೆ ರಂಗಸ್ಥಲದ ಹಿಂತುದಿಯ ಎರಡೂ ಬದಿಗಳಲ್ಲಿ ಅವಕಾಶ. ಅವರ ಪ್ರವೇಶದ ಬಗ್ಗೆ ನಿಯಮಗಳಿವೆ. ಆದರೆ ಅದೇ ರಂಗಸ್ಥಲದಲ್ಲಿ ಕುಳಿತ ವಾದ್ಯಗಾರರ ಮತ್ತು ರಂಗಸ್ಥಲದ ಕೆಲಸಗಾರರ ಬಗ್ಗೆ ನಿಯಮಗಳಂತೂ ಇಲ್ಲ. ಜೊತೆಗೆ ಪೂರ್ತಿ ಸ್ವಾತಂತ್ರ್ಯವಿದೆ. ವಾದ್ಯಗಾರರು ಬೇಕಾದಾಗ ಎದ್ದು ಹೋಗಬಹುದು, ಮತ್ತೆ ಬಂದು ಕೂಡಬಹುದು-ನಾಟಕ ನಡೆದಾಗಲೆ. ಅದರಂತೆಯೆ ಕೆಲಸಗಾರರೂ ನಾಟಕ ನಡೆಯುತ್ತಿರುವಾಗಲೆ ಬೇಕಾದಾಗ ಬಂದು ಕುರ್ಚಿಯನ್ನಿಡಬಹುದು, ಖಡ್ಗವನ್ನು ಕೊಡಬಹುದು, ಯಾವುದನ್ನೂ ಮಾಡಬಹುದು. ಇತ್ತೀಚಿನ ವರೆಗೆ ಈ ವಾದ್ಯಗಾರರಿಗಾಗಲಿ ಕೆಲಸಗಾರರಿಗಾಗಲಿ ವೇಷದ ನಿರ್ಬಂಧವೂ ಇದ್ದಿರಲಿಲ್ಲ. ತಮ್ಮ ದಿನನಿತ್ಯದ ಬಟ್ಟೆಯಲ್ಲಿಯೇ ಅವರಿರುತ್ತಿದ್ದರು. ಪ್ರೇಕ್ಷಕರ ಬಗ್ಗೆಯೂ ಕೆಲಮಟ್ಟಿಗೆ ಈ ಸ್ವಾತಂತ್ರ್ಯವಿದೆ. ಚೀನೀ ಜನ ಅತ್ಯಂತ ರಸಿಕರು, ವಿಲಾಸಿಗಳು ಎಂದು ಎಲ್ಲ ತಜ್ಞರೂ ಹೇಳುತ್ತಾರೆ. ನಾಟಕವನ್ನು ನೋಡಲು ಕುಟುಂಬದ ಜನರೆಲ್ಲ ಬರುವರಲ್ಲದೆ ಜೊತೆಗೆ ಬಾಯಾಡಿಸಲು (ಕಡಲೆಕಾಯಿಯಂತೆ) ಏನನ್ನಾದರೂ ತರುವರಂತೆ. ನಾಟಕ ಸಾಮಾನ್ಯವಾಗಿ ಸಂಜೆಯ ಹೊತ್ತಿಗೆ ಪ್ರಾರಂಭವಾಗಿ ಮಧ್ಯರಾತ್ರಿಯ ತರುವಾಯದ ತುಸುಹೊತ್ತಿಗೆ ಮುಗಿಯುವುದು. ಆದರೆ ಮುಖ್ಯ (ತಾರಾ) ನಟನ ಪ್ರವೇಶ ಮಾತ್ರ ರಾತ್ರಿ ಏರಿದ ಮೇಲೆಯೇ. ಚೀನದ ಪ್ರತಿಯೊಂದು ನಗರದಲ್ಲೂ ಕನಿಷ್ಠ 15-20 ನಾಟಕಗೃಹಗಳಿರುವುವಂತೆ.

	ಚೀನದೇಶದ ರಂಗಭೂಮಿಗೆ ಆಧುನಿಕತೆಯ ಗಾಳಿ ಈ ಶತಮಾನದ ಪ್ರಾರಂಭದವರೆಗೂ ಸೋಂಕಿರಲಿಲ್ಲ. ನೃತ್ಯ, ಸಂಗೀತ ಮತ್ತು ಸಂಭಾಷಣೆ-ಈ ಮೂರೂ ಅಂಶಗಳನ್ನೊಳಗೊಂಡ ವೀರಯೋಧರ ಇಲ್ಲವೆ ಸಾಂಸಾರಿಕ (ಇದೂ ಹೆಚ್ಚಾಗಿ ದಂತಕತೆಗಳಿಗೆ ಸಂಬಂಧಿಸಿದ್ದು) ಕತೆಗಳ ಮತ್ತು ಪ್ರೌಢ, ವ್ಯಾಕರಣಬದ್ಧ, ಗ್ರಾಂಥಿಕ ಶೈಲಿಯಲ್ಲಿ ಬರೆದ ನಾಟಕಗಳೇ ಚೀನೀ ರಂಗಭೂಮಿಯ ವೈಶಿಷ್ಟ್ಯವಾಗಿದ್ದುವು. ಗದ್ಯನಾಟಕ (ಯಾವುದಕ್ಕೆ ಇಂದು ನಾವು ಸ್ಟ್ರೇಟ್ ಡ್ರಾಮ ಎನ್ನುತ್ತೇವೆಯೊ ಅದು), ತತ್ಕಾಲೀನ ಸಮಸ್ಯೆಗಳನ್ನು ಕುರಿತ ನಾಟಕ ಒಂದು ಇದ್ದಿರಲಿಲ್ಲ. ಇಷ್ಟೇಕೆ ಗದ್ಯ ಶೈಲಿಯೇ ಬೆಳೆದಿರಲಿಲ್ಲ. 1907ರಲ್ಲಿ ಲಾ ದಾಮ್ ಓ ತೆಮೆಲಿಯಾ ಎಂಬ ಫ್ರೆಂಚ್ ನಾಟಕದ ಮತ್ತು ಅಂಕಲ್ ತಾಮ್ಸ್ ಕ್ಯಾಬಿನ್ ಎಂಬ ಇಂಗ್ಲಿಷ್ ನಾಟಕದ ಅನುವಾದಗಳ ಪ್ರಯೋಗವೇ ಆಧುನಿಕ ನಾಟಕದ ಪ್ರಾರಂಭವೆನ್ನಬಹುದು. ಈ ತರದ ನಾಟಕಗಳಿಗೆ ಹೊಸ ಇಲ್ಲವೆ ಮಾತನಾಡುವ ನಾಟಕ ಎಂದೇ ಕರೆಯಲಾಗುತ್ತಿದೆ. ಆಧುನಿಕ ಚೀನೀ ನಾಟಕದ ಬೆಳವಣಿಗೆಗೆ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳು ಹೆಚ್ಚಾಗಿ ಪ್ರೇರಕರಾಗಿದ್ದಾರೆ. ಚೀನೀ ನಾಟಕಗಳ ಸಂಭಾಷಣಾ ಶೈಲಿ ಕೃತಕವಾಗಿತ್ತು; ಗದ್ಯ ಎಂಬುದು ವ್ಯಾಕರಣ ನಿಯಮಬದ್ಧವಾಗಿತ್ತು. ಮೇಲೆ ಹೇಳಿದ ಎರಡು ನಾಟಕಗಳ ಅನುವಾದಗಳ ಪ್ರಯೋಗಕ್ಕೂ ಈ ಮಾತು ಅನ್ವಯಿಸುತ್ತಿತ್ತು. ಆದರೆ 1919-20ರ ಸುಮಾರಿಗೆ ಚೀನೀ ವಿದ್ಯಾರ್ಥಿಗಳು ಚಳವಳಿ ಹೂಡಿ ನಾಟಕಗಳಲ್ಲಿ ಬಳಕೆಯ ಭಾಷೆಯನ್ನು ಉಪಯೋಗಿಸುವಂತೆ ಒತ್ತಾಯಪಡಿಸಿದರು. ಮುಂದೆ ನ್ಯಾನ್‍ಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಬ್ಸೆನ್ನನ ಎನಿಮಿ ಆಫ್ ದಿ ಪೀಪಲ್ ಎಂಬ ನಾಟಕದ ಅನುವಾದವನ್ನು ಪ್ರಯೋಗಿದ್ದು ಸಾಮಾಜಿಕ ಸ್ವತಂತ್ರ್ಯನಾಟಕಗಳ ರಚನೆಗೆ ಪ್ರೇರಣೆ ಕೊಟ್ಟಿತು. 1930ರ ಸುಮಾರಿಗೆ, ಸಾಮಾಜಿಕ ಸಮಸ್ಯೆಗಳನ್ನು ಕುರಿತಾದ ನಾಟಕಗಳ ರಚನೆ ಹೆಚ್ಚಿತಲ್ಲದೆ ಈ ಮಾದರಿಯ ಆಧುನಿಕ ನಾಟಕಗಳು ಜನಪ್ರಿಯವಾಗಲು ತೊಡಗಿದವು. ಇಬ್ಸೆನ್ನನ ನಾಟಕಗಳ ಮಾದರಿಯಲ್ಲಿ ಏಕಾಂಕ ನಾಟಕಗಳ ರಚನೆಯೂ ಪ್ರಾರಂಭವಾಯಿತು. ನಾಟಕಕಾರರೆಂಬುವವರೂ ಅಸ್ತಿತ್ವಕ್ಕೆ ಬರತೊಡಗಿದರು.

	ಎರಡನೆಯ ಮಹಾಯುದ್ಧದ ತರುವಾಯ ರಂಗಭೂಮಿ ಆಧುನಿಕತೆಯ ವಾತಾವರಣದಿಂದ ಬದಲಾಗ ತೊಡಗಿತು. ಈಚೆಗೆ ನಾಟಕ ತಯಾರಿಕೆಯ ರೀತಿ ತೀರ ಬದಲಾಗಿದೆ, ಉತ್ತಮಗೊಂಡಿದೆ. ಹೊಸ ಹೊಸ ನಾಟಕಕಾರರು ಹುಟ್ಟುತಲಿದ್ದಾರೆ, ಶ್ರೇಷ್ಠನಟರು ಕಾಣತೊಡಗಿದ್ದಾರೆ. ಚೀನದ ಆಡಳಿತ ವರ್ಗದಲ್ಲಿ ಬದಲಾವಣೆಯಾಗಿದ್ದರೂ ನಾಟಕಗಳಿಗೆ, ನಾಟಕಗೃಹಗಳಿಗೆ ಮತ್ತು ಜನರ ರಸಿಕತೆಗೆ ಕೊರತೆ ಇಲ್ಲ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಸಮಸ್ಯೆಗಳ ಬದಲಾಗಿ ರಾಜಕೀಯ ಪ್ರಚಾರ ನಾಟಕಗಳ ವಿಷಯವಾಗಿರಬಹುದಾದರೂ ಚೀನೀ ರಂಗಭೂಮಿಯ ಬೆಳವಣಿಗೆಗೆ ಚ್ಯುತಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಯಿಸುವುದು ರಂಗಭೂಮಿಯ ಜೀವಂತತನದ ಲಕ್ಷಣ, ಆ ಲಕ್ಷಣ ಚೀನೀ ರಂಗಭೂಮಿಯಲ್ಲಿ ಕಾಣುತ್ತಿದೆ.	(ಎ.ಆರ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ